ಕೃಷ್ಣಸ್ವಾಮಿ, ವಿ ಡಿ		
1904-1970. ಭಾರತೀಯ ಪುರಾತತ್ವ ಶಾಸ್ತ್ರಜ್ಞ. ಮದ್ರಾಸಿನಲ್ಲಿ ಜನಿಸಿ, ಅಲ್ಲಿಯ ವಿಶ್ವವಿದ್ಯಾನಿಲಯದಲ್ಲಿ ಭೂವಿಜ್ಞಾನದಲ್ಲಿ ಎಂ.ಎ. ಪದವೀಧರರಾಗಿ, ಲಂಡನಿನ ಪುರಾತತ್ವ ಶಾಲೆಯಲ್ಲಿ ಪುರಾತತ್ವ ವಿಭಾಗದಲ್ಲಿ ಉನ್ನತ ವ್ಯಾಸಂಗ ನಡೆಸಿ ಭಾರತಕ್ಕೆ ಹಿಂದಿರುಗಿದರು. ಅದುವರೆಗೂ ಉಪೇಕ್ಷಿತವಾಗಿದ್ದ ಭಾರತೀಯ ಶಿಲಾಯುಗ ಮತ್ತು ಬೃಹತ್‍ಶಿಲಾ ಸಮಾಧಿ ಸಂಸ್ಕøತಿಗಳ ಬಗ್ಗೆ ವ್ಯವಸ್ಥಿತ ಅಧ್ಯಯನವನ್ನು ಆರಂಭಿಸಿದ್ದು ಇವರ ಮಹತ್ತ್ವದ ಕಾರ್ಯ. ಮದ್ರಾಸಿನ ಪರಿಸರದಲ್ಲಿರುವ ಕೋರ್ತಲೈಯಾರ್ ನದೀಕಣಿವೆಯಲ್ಲಿ ಇವರು ಮೊಟ್ಟಮೊದಲು ಸಂಶೋಧನ ಕಾರ್ಯನಿರತರಾಗಿದ್ದರು. 

ಅನಂತರ 1944ರಲ್ಲಿ ಭಾರತದ ಪುರಾತತ್ವ ಇಲಾಖೆಯಲ್ಲಿ ಸಂಶೋಧಕರಾಗಿ ಸೇರಿ, 1963ರಲ್ಲಿ ಅದೇ ಇಲಾಖೆಯ ಡೆಪ್ಯುಟಿ ಡೈರೆಕ್ಟರ್ ಜನರಲ್ ಆದರು. ಈ ಹುದ್ದೆಯಿಂದ ನಿವೃತ್ತರಾಗುವವರೆಗೂ ಇವರು ತಮಿಳಿನಾಡಿನ ಬೃಹತ್ ಶಿಲಾಯುಗ ಸಂಸ್ಕøತಿಗಳು, ಭಾರತದ ನವಶಿಲಾಯುಗ ಸಂಸ್ಕøತಿಗಳು, ಕರ್ಣಾಟಕದ ಶಿಲಾಕೆತ್ತನೆಗಳು ಮತ್ತು ರೇಖಾಚಿತ್ರಗಳು, ಭಾರತದ ಸೂಕ್ಷ್ಮ ಶಿಲಾಯುಗದ ಸಂಸ್ಕøತಿಗಳು ಮುಂತಾದ ವಿಷಯಗಳ ಮೇಲೆ ವಿಶೇಷ ಅಧ್ಯಯನ ನಡೆಸಿದರು. ಇದರ ಫಲವಾಗಿ ಪ್ರಿ-ಹಿಸ್ಟಾರಿಕ್ ಮ್ಯಾನ್ ರೌಂಡ್ ಮದ್ರಾಸ್ (1938), ಸ್ಟೋನ್ ಏಜ್ ಇಂಡಿಯ (1947), ಮೆಗಾಲಿಥಿಕ್ ಟೈಪ್ಸ್ ಆಫ್ ಸೌತ್ ಇಂಡಿಯ (1949), ಲಿಥಿಕ್ ಟೂಲ್ ಇಂಡಸ್ಟ್ರೀಸ್ ಆಫ್ ಸಿಂಗ್ರೌಲಿ (1951), ಪ್ರೋಗ್ರೆಸ್ ಇನ್ ಪ್ರಿ-ಹಿಸ್ಟೊರಿ (1952), ನಿಯೊಲಿಥಿಕ್ ಪ್ಯಾಟರ್ನ್ ಆಫ್ ಇಂಡಿಯ (1962) ಎಂಬ ಲೇಖನಗಳು ಪ್ರಕಟವಾಗಿವೆ. ಭೂವಿಜ್ಞಾನ ರೀತಿಯಾಗಿ ಒಂದು ಪ್ರದೇಶದ ನದೀಮಟ್ಟಗಳ ಕಾಲ ನಿರ್ಣಯ, ನದೀಮಟ್ಟಗಳಲ್ಲಿ ಕಾಣಬರುವ ಶಿಲಾಯುಗ ಸಂಸ್ಕøತಿಗಳ ವಿಶ್ಲೇಷಣಾತ್ಮಕ ಪರಿಶೀಲನೆ- ಇಂಥ ಕಾರ್ಯಗಳನ್ನು ಭಾರತದ ಪ್ರಾಗಿತಿಹಾಸ ಸಂಶೋಧನೆಯ ಅಂಗವಾಗಿ ಮೊಟ್ಟಮೊದಲು ಕೈಗೊಂಡವರು ಕೃಷ್ಣಸ್ವಾಮಿ, ಕೋರ್ತಲೈಯಾರ್ ನದೀಕಣಿವೆಯಲ್ಲಿ, ಇವರಿಗೆ ಮುಂಚೆ ಈ ದಿಕ್ಕಿನಲ್ಲಿ ಸ್ವಲ್ಪಮಟ್ಟಿಗೆ ಸಂಘಟಿತ ಕಾರ್ಯ ನಡಿದಿದ್ದುದು 1935ರಲ್ಲಿ-ಯೇಲ್ ಮತ್ತು ಕೇಂಬ್ರಿಜ್ ವಿಶ್ವವಿದ್ಯಾಲಯಗಳಿಂದ. ಶಿಲಾಯುಗ ಭಾರತದ ಬಗ್ಗೆ ಅಸ್ತವ್ಯಸ್ತವಾಗಿ ಹಂಚಿಹೋಗಿದ್ದ ಮಾಹಿತಿಗಳನ್ನು ಒಟ್ಟುಗೂಡಿಸಿ ವೈಜ್ಞಾನಿಕವಾಗಿ ಪರಿಶೀಲಿಸಿ, ಭಾರತದ ಇತಿಹಾಸಪೂರ್ವ ಸಂಸ್ಕøತಿಗಳ ಬಗ್ಗೆ ಒಂದು ವ್ಯವಸ್ಥಿತ ಚಿತ್ರವನ್ನು ಪ್ರಥಮ ಬಾರಿಗೆ ಒದಗಿಸಿದವರು ಕೃಷ್ಣಸ್ವಾಮಿಯವರು. ಈ ವಿಷಯದ ಅಭ್ಯಾಸಿಗಳಿಗೆ ಇಂದಿಗೂ ಇದು ಮುಖ್ಯ ಆಧಾರ ಮತ್ತು ಮಾದರಿ ಲೇಖನವಾಗಿದೆ. ಅನಂತರ 1952ರವರೆಗೆ ನಡೆದ ಪ್ರಾಗೈತಿಹಾಸಿಕ ಸಂಶೋಧನೆಗಳನ್ನೆಲ್ಲ ಕ್ರೋಢೀಕರಿಸಿ ಈ ಅಧ್ಯಯನದ ವಿಹಂಗಮ ನೋಟವನ್ನು ಒದಗಿಸಿರುವ 'ಪ್ರೋಗ್ರೆಸ್ ಇನ್ ಪ್ರಿ-ಹಿಸ್ಟೊರಿ' ಇವರ ಇನ್ನೊಂದು ಅಮೂಲ್ಯಲೇಖನ. ಭಾರತದ ಬೃಹತ್ ಶಿಲಾಸಮಾಧಿ ಸಂಸ್ಕøತಿಗಳ ಅಧ್ಯಯನ ಕ್ಷೇತ್ರದಲ್ಲಿ ನಿಖರ ಪರಿಭಾಷೆಯಾಗಲಿ, ಖಚಿತ ಅಭಿಪ್ರಾಯಗಳಾಗಲಿ ಇಲ್ಲದಿದ್ದ ಸ್ಥಿತಿಯಲ್ಲಿ ತಮಿಳುನಾಡು ಮತ್ತು ಕೇರಳದ ಕೆಲವು ಪ್ರದೇಶಗಳಲ್ಲಿ ಈ ಸಂಸ್ಕøತಿಗಳ ಅವಶೇಷಗಳನ್ನು ವ್ಯಾಪಕವಾಗಿ ಅಭ್ಯಸಿಸಿ ಇವರು ಮೊದಲ ಬಾರಿಗೆ ಒಂದು ವೈಜ್ಞಾನಿಕ ವರ್ಗೀಕರಣವನ್ನು ಒದಗಿಸಿದರು. ಇವರ ಇತರ ಲೇಖನಗಳೂ ಹೀಗೆಯೇ ಹೊಸ ಹೆಜ್ಜೆಗಳು. ಇವರ ಲೇಖನಗಳು ಸಂಖ್ಯೆಯಲ್ಲಿ ಅಲ್ಪವಾದರೂ ಒಂದೊಂದು ಭಾರತೀಯ ಪ್ರಾಗಿತಿಹಾಸದ ಅಧ್ಯಯನದಲ್ಲಿ ಮೈಲಿಗಲ್ಲುಗಳೆಂದು ಪರಿಗಣಿತವಾಗಿವೆ. ಕೃಷ್ಣಸ್ವಾಮಿ ತಮ್ಮ ಅಧಿಕಾರಾವಧಿಯಲ್ಲಿ ಭಾರತದ ಅನೇಕ ಪ್ರಾಚೀನ ಸ್ಮಾರಕಗಳನ್ನು ರಕ್ಷಿಸುವುದರಲ್ಲಿ ಆಸಕ್ತಿಯನ್ನೂ ಸಕ್ರಿಯಪಾತ್ರವನ್ನೂ ವಹಿಸಿದ್ದರು. ನಿವೃತ್ತಿಯ ಅನಂತರ ಕಲ್ಕತ್ತದ ಭಾರತೀಯ ವಸ್ತುಸಂಗ್ರಹಾಲಯ ಮತ್ತು ಹೈದರಾಬಾದಿನ ಸಾಲಾರ್ಜಂಗ್ ವಸ್ತು ಸಂಗ್ರಹಾಲಯಗಳ ನಿರ್ದೇಶಕರಾಗಿದ್ದು, ಅವನ್ನು ಆಕರ್ಷಕವಾಗಿ ಪುನವ್ರ್ಯವಸ್ಥೆಗೊಳಿಸಲು ಕಾರಣರಾದರು. ತರುಣಪೀಳಿಗೆಯ ಅನೇಕರಿಗೆ ಭಾರತೀಯ ಪುರಾತತ್ವದಲ್ಲಿ ಯೋಗ್ಯ ತರಬೇತು ನೀಡಿ, ಆ ಕ್ಷೇತ್ರವನ್ನು ಸಮೃದ್ಧಗೊಳಿಸಿದ್ದು ಕೃಷ್ಣಸ್ವಾಮಿಯವರು ಮಾಡಿದ ಇನ್ನೊಂದು ದೊಡ್ಡ ಕೆಲಸ.  			
(ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ